ಆವ ಪರಬೊಮ್ಮನತಿ ವಿಮಲಾಂ
ಗಾವ ಬದ್ಧರುಯೆಂದೆನಿಪ ರಾ
ಜೀವ ಭವ ಮೊದಲಾದಮರರನು ದಿನದಿ ಹರಿಪದವ |
ಸೇವಿಪರಿಗನುಕೂಲರಲ್ಲದೆ
ತಾವು ಇವರನ ಕೆಡಿಸಬಲ್ಲರೆ
ಶ್ರೀವಿಲಾಸಾಸ್ಪದನ ದಾಸರಿಗುಂಟೆ ಅಪಜಯವು  ||೧||

ಶ್ರೀದನಂಘ್ರಿ ಸರೋಜಯಗಳೇ
ಕಾದಶ ಸ್ಥಾನಾತ್ಮದೊಳಗಿ
ಟ್ಟಾದರದಿ ಸಂತುತಿಸುವವರಿಗೀ ನವಗ್ರಹವು |
ಆದಿತೇಯರು ಸಂತಾತಾಧಿ
ವ್ಯಾಧಿಗಳ ಪರಿಹರಿಸುತವರನು
ಕಾದುಕೊಂಡಿಹರೆಲ್ಲರೊಂದಾಗೀಶನಾಜ್ಞೆಯಲಿ  ||೨||

ಮೇದಿನಿಯ ಮೇಲುಳ್ಳ ಗೋಷ್ಪಾ
ದೋದಕಗಳೆಲ್ಲ ಮಲ ತೀರ್ಥವು
ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ
ಶ್ರೀದನ ಪ್ರತಿಮೆಗಳು ಅವರುಂ
ಬೋದನವೆ ನೈವೇದ್ಯ ನಿತ್ಯದಿ
ಹಾದಿ ನಡೆವುದೆ ನರ್ತನಗಳೆಂದರಿತವನೆ ಯೋಗಿ  ||೩||

ಸರ್ವದೇಶವು ಪುಣ್ಯ ದೇಶವು 
ಸರ್ವಕಾಲವು ಪರ್ವ ಕಾಲವು
ಸರ್ವ ಜೀವರು ದಾನಪಾತ್ರರು ಮೂರು ಲೋಕದಲಿ |
ಸರ್ವ ಮಾತುಗಳೆಲ್ಲಾ ಮಂತ್ರವು
ಸರ್ವ ಕೆಲಸಗಳೆಲ್ಲ ಪೂಜೆಯು
ಶರ್ವವಂದ್ಯನ ವಿಮಲಮೂರ್ತಿ ಧ್ಯಾನ ಉಳ್ಳರಿಗೆ  ||೪||

ದೇವಖಾತ ತಟಾಕ ವಾಪಿ ಸ
ರೋವರಗಳಭಿಮಾನಿ ಸುರರು ಕ
ಳೇವರದೊಳಿಹ ರೋಮಕೂಪಗಳೊಳಗೆ ತುಂಬಿಹರು |
ಆವಿಯದ್ಗಂಗಾದಿನದಿಗಳು
ಭಾವಿಸುವುದೆಪ್ಪತ್ತೆರಡೆನಿಪ
ಸಾವಿರ ಸುನಾಡಿಗಳೊಳಗೆ ಪ್ರವಹಿಸುತಲಿಹವೆಂದು  ||೫||

ಮೂರು ಕೋಟಿಯ ಮೇಲೆ ಶೋಭಿಪ
ಈರಧಿಕ ಎಪ್ಪತ್ತು ಸಾವಿರ
ಮಾರುತಾಂತರ್ ಯಾಮಿ ಮಾಧವ ಪ್ರತಿದಿವಸದಲ್ಲಿ |
ತಾ ರಮಿಸುತಿಹನೆಂದು ತಿಳಿದಿಹ
ಸೂರಿಗಳೇ ದೇವತೆಗಳವರ ಶ
ರೀರಗಳೇ ಸುಕ್ಷೇತ್ರವವರರ್ಚನೆಯು ಹರಿ ಪೂಜೆ  ||೬||

ಶ್ರೀವರನಿಗಭಿಷೇಕವೆಂದರಿ
ದೀವಸುಂಧರೆಯೊಳಗೆ ಬಲ್ಲವ
ರಾವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು |
ತಾ ಒಲಿದು ಬಂದಲ್ಲೆ ನೆಲೆಗೊಂ
ಡೀವರಖಿಳಾರ್ಥಗಳನರಿಯದ
ಜೀವರಮರ ತರಂಗಿಣಿಯನೈದಿದರು ಫಲವೇನು  ||೭||

ನದ ನದಿಗಳಿಳೆಯೊಳಗೆ ಪರಿವುವು
ಉದಧಿಪರಿಯಂತರದಿ ತರುವಾ
ಯದಲಿ ರಮಿಸುವುವಲ್ಲಿ ತನ್ಮಯವಾಗಿ ತೋರದಲೆ |
ವಿಧಿ ನಿಷೇಧಗಳಾಛರಿಸುವರು
ಬುಧರು ಭಗವದ್ರೂಪ ಸರ್ವ
ತ್ರದಲಿ ಚಿಂತನೆ ಬರಲು ತ್ಯಜಿಸುವರಖಿಳ ಕರ್ಮಗಳ  ||೮||

ಕಲಿಯೆ ಮೊದಲಾದಖಿಳ ದಾನವ
ರೊಳಗೆ ಬ್ರಹ್ಮ ಭವಾದಿ ದೇವ
ರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ ಅವರವರ |
ಕಲುಷ ಕರ್ಮವ ಮಾಡಿ ಮಾಡಿಸಿ
ಜಲರುಹೇಕ್ಷಣಗರ್ಪಿಸುತ ನಿ
ಶ್ಚಲ ಸುಭಕ್ತಿ ಜ್ಞಾನಪೂರ್ಣರು ಸುಖಿಪರವರೊಳಗೆ  ||೯||

ಆವ ಜೀವರೊಳಿದ್ದರೇನಿ
ನ್ನಾವ ಕರ್ಮನ ಮಾಡಲೇನಿ
ನ್ನಾವ ಗುಣ ರೂಪಗಳುಪಾಸಲೆ ಮಾಡಲೇನವರು |
ಕಾವನಯ್ಯನ ಪರಮ ಸತ್ಕರು
ಣಾವ ಲೋಕನ ಬಲದಿ ಚರಿಸುವ
ದೇವತೆಗಳನು ಮುಟ್ಟಲಾಪವೆ ಪಾಪ ಕರ್ಮಗಳು  ||೧೦||

ಪತಿಯೊಡನೆ ಮನಬಂದ ತೆರದಲಿ
ಪ್ರತಿ ದಿವಸದಲಿ ರಮಿಸಿ ಮೋದಿಸಿ
ಸುತರ ಪಡೆದಿಳೆಯೊಳು ಜಿತೇಂದ್ರಿಯಳೆಂದು ಕರೆಸುವಳು |
ಕೃತಿಪತಿ ಕಥಾಮೃತ ಸುಭೋಜನ
ರತ ಮಹಾತ್ಮರಿಗಿತರ ದೋಷ
ಪ್ರತತಿಗಳು ಸಂಬಂಧಿಸುವವೇನಚ್ಯುತನ ದಾಸರಿಗೆ  ||೧೧||

ಸೂಸಿಬಹ ನದಿಯೊಳಗೆ ತನ್ನ ಸ
ಹಾಸ ತೋರುವೆನೆನುತ ಜಲಕಿ
ದಿರೀಸಿದರೆ ಕೈ ಸೋತು ಮುಳುಗುವ ಹರಿಯ ಬಿಟ್ಟವನು |
ಕ್ಲೇಶವೈದುವನಾದಿಯಲಿ ಸ
ರ್ವೇಶ ಕ್ಲುಪ್ತಿಯ ಮಾಡಿದುದ ಬಿ
ಟ್ಟಾಸೆಯಿಂದಲಿ ಅನ್ಯರಾರಾಧಿಸುವ ಮಾನವನು  ||೧೨||

ನಾನು ನನ್ನದು ಎಂಬ ಜಡಮತಿ
ಮಾನವನು ದಿನದಿನದಿ ಮಾಡುವ
ಸ್ನಾನ ಜಪ ದೇವಾರ್ಚರೆಯು ಮೊದಲಾದ ಕರ್ಮಗಳ |
ದಾನವರು ಸೆಳೆದೊಯ್ವರಲ್ಲದೆ
ಶ್ರೀನಿವಾಸರು ಸ್ವೀಕರಿಸ ಮ
ದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದವೋಲಹುದು  ||೧೩||

ಧರಿತ್ರಿಯೊಳಗುಳ್ಳಖಿಳ ತೀರ್ಥ
ಕ್ಷೇತ್ರ ಚರಿಸಿದರೇನು ಪಾತ್ರಾ
ಪಾತ್ರವರಿತನ್ನಾದಿ ದಾನವ ಮಾಡಿ ಫಲವೇನು |
ಗಾತ್ರ ನಿರ್ಮಲನಾಗಿ ಮಂತ್ರ
ಸ್ತೋತ್ರ ಪಠಿಸಿದರೇನು ಹರಿಸ
ರ್ವತ್ರಗತನೆಂದರಿಯದಲೆ ತಾ ಕರ್ತೃ ಎಂಬುವನು  ||೧೪||

ಕಂಡ  ನೀರೊಳು ಮುಳುಗಿ ದೇಹವ
ದಂಡಿಸಿದ ಫಲವೇನು ದಂಡ ಕ
ಮಂಡಲಗಳನೆ ಧರಿಸಿ ಯತಿಯೆಂದೆನಿಸಿ ಫಲವೇನು |
ಅಂಡಜಾಧಿಪನಂಸಗನ
ಪದ ಪುಂಡರೀಕದಿ ಮನವಹರ್ನಿಶಿ
ಬಂಡುಣಿಯವೋಲಿರಿಸಿ ಸುಖಪಡದಿಪ್ಪ ಮಾನವನು  ||೧೫||

ವೇದಶಾಸ್ತ್ರ ಪುರಾಣ ಕಥೆಗಳ
ಓದಿ ಕೇಳಿದರೇನು ಸಕಲ ನಿ
ಷೇಧ ಕರ್ಮವ ತೊರೆದು ಸತ್ಕರ್ಮ ಮಾಡೇನು |
ಓದನಂಗಳನು ಜರಿದು ಶ್ವಾಸನಿ
ರೋಧ ಗೈಸಿದರೇನು ಕಾಮ
ಕ್ರೋಧವಳಿಯದೆ ನಾನು ನನ್ನದು ಎಂಬ ಮಾನವನು  ||೧೬||

ಏನು ಕೇಳಿದರೇನು ನೋಡಿದ
ರೇನು ಓದಿದರೇನು ಪೇಳಿದ
ರೇನು ಪಾಡಿದರೇನು ಮಾಡಿದರೇನು ದಿನದಿನದಿ |
ಶ್ರೀನಿವಾಸನ ಜನ್ಮ ಕರ್ಮಸ
ದಾನುರಾಗದಿ ನೆನೆದು ತತ್ತ
ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ  ||೧೭||

ಬುದ್ಧಿ ವಿದ್ಯಾ ಬಲದಿ ಪೇಳಿದ
ಶುದ್ಧ ಕಾವ್ಯವಿದಲ್ಲ ತತ್ವಸು
ಪದ್ಧತಿಗಳನು ತಿಳಿದ ಮಾನವನಲ್ಲ ಬುಧರಿಂದ |
ಮಧ್ವವಲ್ಲಭ ತಾನೆ ಹೃದಯದೊ
ಳಿದ್ದು ನುಡಿದಂದದಲಿ ನುಡಿದೆನ
ಪದ್ಧಗಳ ನೋಡದಲೆ ಕಿವಿಗೊಟ್ಟಾಲಿಪುದು ಬುಧರು  ||೧೮||

ಕಬ್ಬಿನೊಳಗಿಹ ರಸ ವಿದಂತನಿ
ಗಬ್ಬ ಬಲ್ಲುದೆ ಭಾಗ್ಯ ಯೌವನ
ಮಬ್ಬಿನಲಿ ಮೈ ಮರೆದವಗೆ ಹರಿಸುಚರಿತಾಮೃತವು |
ಲಭ್ಯವಾಗದು ಹರಿಪದಾಬ್ಜದಿ
ಹಬ್ಬಿದತಿ ಸದ್ಭಕ್ತಿ ರಸವುಂ
ಡುಬ್ಬಿ ಕೊಬ್ಬಿ ಸುಖಾಬ್ಧಿಯೊಳಗಾಡುವವಗಲ್ಲದಲೆ  ||೧೯||

ಖಗವರಧ್ವಜನಂಘ್ರಿ ಭಕುತಿಯ
ಬಗೆಯನರಿಯದ ಮಾನವರಿಗಿದು
ಒಗಟಿನಂದದಿ ತೋರುತಿಪ್ಪುದು ಎಲ್ಲ ಕಾಲದಲಿ |
ತ್ರಿಗುಣ ವರ್ಜಿತನಮಲ ಗುಣಗಳ
ಪೊಗಳಿ ಹಿಗ್ಗುವ ಭಾಗವತರಿಗೆ
ಮಿಗೆ ಭಕುತಿ ಸುಜ್ಞಾನ ಸುಖವಿತ್ತವರ ರಕ್ಷಿಪುದು  ||೨೦||

ಪರಮ ತತ್ವ ರಹಸ್ಯವಿದು ಭೂ
ಸುರರು ಕೇಳ್ವುದು ಸಾದರದಿ ನಿ
ಷ್ಠುರಿಗಳಿಗೆ ಮೂಢರಿಗೆ ಪಂಡಿತಮಾನಿ ಪಿಶುನರಿಗೆ |
ಅರಸಿಕರಿಗಿದು ಪೇಳ್ವುದಲ್ಲನ
ವರತ ಭಗವತ್ಪಾದಯುಗಳಾಂ
ಬುರುಹ ಮಧುಕರರೆನಿಸುವರಿಗರುಪುವುದು ಮೋದದಲಿ  ||೨೧||

ಲೋಕ ವಾರ್ತೆಯಿದಲ್ಲ ಪರಲೋ
ಕೈಕನಾಥನ ವಾರ್ತೆ ಕೇಳ್ವರೆ
ಕಾಕು ಮನುಜರಿಗಿದು ಸಮರ್ಪಕವಾಗಿ ಸೊಗಯಿಸಲು |
ಕೋಕನದ ಪರಿಮಳವು  ಷಟ್ಪ್ದ
ಸ್ವೀಕರಿಸುವಂದದಲಿ ಜಲಚರ
ಭೇಕ ಬಲ್ಲುದೆ ಇದರ ರಸ ಹರಿ ಭಕ್ತಗಲ್ಲದಲೆ  ||೨೨||

ಸ್ವಪ್ರಯೋಜನ ರಹಿತ ಸಕಲೇ'
ಷ್ಟ ಪ್ರದಾಯಕ ಸರ್ವ ಗುಣ ಪೈ
ರ್ಣ ಪ್ರಮೇಯ ಜರಾಮರಣವರ್ಜಿತ ವಿಗತಶೋಕ |
ವಿಪ್ರತಮ ವಿಶ್ವಾತ್ಮ ಘೃಣಿ ಸೂ
ರ್ಯ ಪ್ರಕಾಶಾನಂತ ಮಹಿಮ ಘೃ
ತ ಪ್ರತೀಕಾರಾದಿತಾಂಘ್ತ್ರಿ ಸರೋಜ ಸುರರಾಜ  ||೨೩||

ವನಚರಾದ್ರಿ ಧರಾಧರನೆ ಜಯ
ಮನುಜ ಮೃಗವರ ವೇಷ ಜಯ ವಾ
ಮನ ತ್ರಿವಿಕ್ರಮದೇವ ಜಯ ಭೃಗುರಾಮ ಭೂಮ ಜಯ |
ಜನಕಜಾ ವಲ್ಲಭನೆ ಜಯ ರು
ಕ್ಮಿಣಿ ಮನೋರಥ ಸಿದ್ಧಿ ಪ್ರದಜಯ
ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ ||೨೪||

ಸಚ್ಚಿದಾನಂದಾತ್ಮ ಬ್ರಹ್ಮಕ
ರಾರ್ಚಿತಾಂಘ್ರಿ ಸರೋಜ ಸುಮನಸ 
ಪ್ರೋಚ್ಚ ಸನ್ಮಂಗಳದ ಮಧ್ವಾಂತಃಕರಣರೂಢ |
ಅಚ್ಯುತ ಜಗನ್ನಾಥವಿಠಲ
ನಿಚ್ಚ ಮೆಚ್ಚಿದ ಜನರ ಬಿಡ ಕಾ
ಳ್ಗಿಚ್ಚನುಂಡಾರಣ್ಯದೊಳು ಗೋಗೋಪರನು ಕಾಯ್ದ   ||೨೫||